ಎಮರೀ-
	ಕುರಂದ ಮ್ಯಾಗ್ನಟೈಟ್ ಮತ್ತು ಸ್ಪಿನೆಲ್ ಖನಿಜ ರೂಪಗಳು ಒಟ್ಟುಗೂಡಿ ಸಹಜವಾಗಿ ದೊರೆಯುವಂಥ ಖನಿಜ ಸಮುದಾಯ. ಈ ಬಗೆಯ ಕಲ್ಲು ಗ್ರೀಸ್ ದೇಶದಲ್ಲಿರುವ ಕೇಪ್ ಎಮರಿಯಲ್ಲಿ ಮೊದಲು ಗುರುತಿಸಲಾದುದರಿಂದ ಇದನ್ನು ಎಮರೀ ಎಂದು ಕರೆಯುವುದು ವಾಡಿಕೆಯಾಗಿದೆ. ಗ್ರೀಸ್, ತುರ್ಕಿ ಮತ್ತು ಅಮೆರಿಕ ದೇಶಗಳಲ್ಲಿನ ಎಮರೀ ಉತ್ತಮವೆಂದು ಪರಿಗಣಿಸಲ್ಪಟ್ಟಿದೆ. ವಜ್ರ, ಕುರಂದಗಳಂತೆ ಎಮರೀ ಅತಿ ಕಠಿಣವಾದ ಗಡುಸಾದ ಕಲ್ಲು. ಇದರ ಗಡಸುತನ ಮುಖ್ಯವಾಗಿ ಇದರಲ್ಲಿ ಸೇರಿರುವ ಕುರಂಗದ ಪ್ರಮಾಣದಿಂದ ಬರುತ್ತದೆ. ಎಮರೀ ದಪ್ಪ ಹರಳುಗಳನ್ನೊಳಗೊಂಡು ತರಕುತರಕಾಗಿರುವುದು, ಅಥವಾ ಸಣ್ಣ ಹರಳುಗಳು ಒಟ್ಟುಗೂಡಿ ನುಣುಪಾಗಿಯೂ ಇರಬಹುದು. ಇದು ಅತಿ ಹೆಚ್ಚಿನ ಉಷ್ಣವನ್ನು ತಡೆದುಕೊಳ್ಳಬಲ್ಲುದು. ಇಂಥ ಗುಣಗಳನ್ನೊಳಗೊಂಡಿರುವ ಕಾರಣದಿಂದಲೇ ಎಮರೀ ಸಾಣೆ ಹಿಡಿಯುವ ಕೆಲಸದಲ್ಲಿ ವಿಶೇಷವಾಗಿ ಉಪಯೋಗವಾಗುತ್ತದೆ. ಮುಖ್ಯವಾಗಿ ಚಕ್ರಗಳ ರೂಪದಲ್ಲಿ ಇಲ್ಲವೆ ವಿಧ ವಿಧ ಅಳತೆ ಪ್ರಮಾಣದ ಪುಡಿಗಳಾಗಿ ಸಾಣೆ ಹಿಡಿಯಲು, ಮೆರಗು ಕೊಡಲು ಇದನ್ನು ಉಪಯೋಗಿಸುತ್ತಾರೆ. 

	ಗ್ರೀಸಿನಲ್ಲಿರುವ ನಾಸಾಸ್‍ನಿಂದ ಬರುವ ಕಲ್ಲು ನಾಸಾಸ್ ಎಮರೀ ಎಂದು ಪ್ರಸಿದ್ಧವಾಗಿದೆ. ತುರ್ಕಿ ಮತ್ತು ಅಮೆರಿಕ ದೇಶಗಳಲ್ಲೂ ಎಮರಿಯನ್ನು ಉತ್ಪಾದಿಸುತ್ತಾರೆ. 

	ಕುರಂದ ಕಲ್ಲು ಭಾರತ ದೇಶದ ಅನೇಕ ಪ್ರಾಂತಗಳಲ್ಲಿ ಸಿಕ್ಕುವುದಾದರೂ ಎಮರೀ ರೂಪದಲ್ಲಿ ಅದು ಮಾರಾಟವಾಗುತ್ತಿಲ್ಲ. ಎಮರೀ ಉಪಯೋಗವಾಗುವ ಕಡೆಗಳಲ್ಲೆಲ್ಲ ಕುರಂದ ಕಲ್ಲನ್ನು ಉಪಯೋಗಿಸಬಹುದು. 

	ಹೆಚ್ಚಿನ ವಿವರಗಳಿಗೆ			(ನೋಡಿ- ಕುರಂದ)	
							(ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ